ಸಿಫೈಡ್ ಚಂಚಲತಾರೆಗಳು

	ತಮ್ಮ ಉಜ್ಜ್ವಲತೆಯಲ್ಲಿ 1ರಿಂದ 20 ದಿವಸಗಳ ಅವಧಿಯಲ್ಲಿ ನಿಯತಕಾಲಿತವಾಗಿ ಏರಿಳಿತ ಪ್ರದರ್ಶಿಸುವ ವಿಶಿಷ್ಟ ಪ್ರಭೇದದ ನಕ್ಷತ್ರಗಳು (ಸಿಫೈಡ್ ವೇರಿಯೆಬಲ್ಸ್). ಮೊದಲಬಾರಿಗೆ ಈ ಪ್ರಭೇದವನ್ನು ಗುರುತಿಸಿದ್ದು ಸಿಫಿಯಸ್ (ಯುಧಿಷ್ಠಿರ) ನಕ್ಷತ್ರ ಪುಂಜದ ಉಜ್ಜ್ವಲತಾಂಕ 4 ಇದ್ದ ಒಂದು ನಕ್ಷತ್ರದಲ್ಲಿ ಇದರ ಶಾಸ್ತ್ರೀಯ ನಾಮ ಡೆಲ್ಟಾ ಸಿಫಿಯಸ್. ಆದ್ದರಿಂದ ಈ ವರ್ಗದ ನಕ್ಷತ್ರಗಳಿಗೆ ಸಿಫೈಡ್‍ಗಳೆಂಬ ಹೆಸರು. 1912ರಲ್ಲಿ ಸಿಫೈಡ್ ವರ್ಗದ 25 ಚಂಚಲ ತಾರೆಗಳನ್ನು ವೀಕ್ಷಕಿ ಹೆನ್ರಿಟಾ ಲೆವಿಟ್ (1818-1921) ಕೂಲಂಕಷವಾಗಿ ಅಭ್ಯಸಿಸಿದಳು. ಈ ಯಾವುದೂ ಆಕಾಶಗಂಗೆಗೆ (ಸ್ಥಳೀಯ ಬ್ರಹ್ಮಾಂಡ) ಸೇರಿದುದಾಗಿರಲಿಲ್ಲ ಸಮೀಪ ಬ್ರಹ್ಮಾಂಡಗಳಾದ ಮ್ಯಾಗೆಲಾನಿಕ್ ಮೇಘಗಳಿಗೆ ಸೇರಿದವು. ಈ ಅಧ್ಯಯನದಿಂದ ಹೊರಬಿದ್ದ ವಿಷಯ ಸ್ವಾರಸ್ಯಕರವಾಗಿತ್ತು: ಅಧಿಕ ಉಜ್ಜ್ವಲತೆಯ ನಕ್ಷತ್ರದ ಚಂಚಲತೆಯ ಅವಧಿಯೂ ಅಧಿಕ. ಅಂದರೆ ಅಂತರಿಕ ಶಕ್ತಿಗೂ ಚಂಚಲತೆಗೂ ನೇರಸಂಬಂಧವಿದೆ ಎಂದಾಯಿತು. ಇದನ್ನು ವಿವರಿಸಲು ಕವಾಟವೊಂದರಿಂದ ಆಗಾಗ್ಗೆ ಬಿಡುಗಡೆಯಾಗಬಹುದಾದ ಬಲೂನಿನ ವಾಯು ಸಂಮರ್ದದ ಉದಾಹರಣೆ ಕೊಡಬಹುದು. ಸಂಮರ್ದ ಏರಿ ಮಿತಿ ಮಟ್ಟಿದಾಗ ಕವಾಟ ತೆರೆಯುತ್ತದೆ; ಕಡಿಮೆಯಾದಾಗ ಬಲೂನು ಕುಗ್ಗುತ್ತದೆ. ಮತ್ತೆ ಪುನಃ ಹಿಗ್ಗಲು ಆರಂಭವಾಗುತ್ತದೆ. ತಾರೆಯ ಆಂತರ್ಯದಲ್ಲೂ ಇಂಥದೊಂದು ವಿದ್ಯಮಾನ ನಡೆಯುತ್ತಿರಬೇಕೆಂದು ಪರಿಕಲ್ಪಿಸಿ ಇದಕ್ಕೆ ಸಿಫೈಡ್ ವಾಲ್ವ್ ಇಫೆಕ್ಟ್ (ಸಿಫೈಡ್ ಕವಾಟ ಪರಿಣಾಮ) ಎಂದು ಹೆಸರಿಸಲಾಯಿತು. ಸಿಫೈಡುಗಳ ಚಂದಲತೆಯ ಅವಧಿಯನ್ನು ಕರಾರುವಕ್ಕಾಗಿ ತಿಳಿದು, ಲೆವಿಟ್ ಸೂಚಿಸಿದ ಸೂತ್ರದಿಂದ ಆಂತರಿಕ ಕಾಂತಿಮಾನವನ್ನು ತಿಳಿಯಬಹುದು ಅಂದರೆ ಪರೋಕ್ಷವಾಗಿ ತಾರೆಯ ದೂರವನ್ನು ನಿಖರವಾಗಿ ಗಣಿಸುವುದು ಸಾಧ್ಯ. ಈ ತಂತ್ರವನ್ನು ಎಡ್ವಿನ್ ಹಬ್ಬಲ್ (1889-1953) ಬಳಸಿ ಆಂಡ್ರೊಮಿಡಾ (ದ್ರೌಪದಿ) ಮುಂತಾದ ಬ್ರಹ್ಮಾಂಡಗಳ ದೂರಗಳನ್ನು ಗಣಿಸಿದ. ಸಿಫೈಡ್‍ಗಳು ದೈತ್ಯವರ್ಗಕ್ಕೆ ಸೇರಿದ ತಾರೆಗಳಾದ್ದರಿಂದ ಸಾಕಷ್ಟು ಉಜ್ಜ್ವಲವಾಗಿರುತ್ತವೆ. ಇತರ ಬ್ರಹ್ಮಾಂಡಗಳಲ್ಲಿಯೂ ಇವನ್ನು ಗುರುತಿಸುವುದು ಸಾಧ್ಯವಿದೆ. ಆದ್ದರಿಂದ ಹಬ್ಬಲ್ ದೂರದರ್ಶಕ ಬಳಸಿ  ಅಧಿಕಾಧಿಕ ದೂರದ ಬ್ರಹ್ಮಾಂಡಗಳ ದೂರಗಳನ್ನು ಅಳೆಯುವತ್ತ ಹಬ್ಬಲ್ ಸೂತ್ರವನ್ನು ನಿಖರಗೊಳಿಸುವ ಪ್ರಯತ್ನ ನಡೆಯುತ್ತಿದೆ.								
		(ಎಸ್.ಎಚ್.ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ